ಮಾರಕ ಕಾಯಿಲೆ ಇದ್ದರೂ ಅದನ್ನೆಲ್ಲಾ ದಿಕ್ಕರಿಸಿ ಈ ಬಾಲಕಿ SSLCಯಲ್ಲಿ ಮಾಡಿದ ಸಾಧನೆ ಕೇಳಿದ್ರೆ ಹ್ಯಾಟ್ಸಾಪ್ ಹೇಳದೇ ಇರಲ್ಲ..!

ದೇಹದ ಎಲ್ಲಾ ಅಂಗಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಎಷ್ಟೋ ವಿದ್ಯಾರ್ಥಿಗಳಿಗೆ ಓದುವುದೇ ಕಷ್ಟ. ಅಂತಹದರಲ್ಲಿ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯೊಬ್ಬಳು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇಕಡ 80ರಷ್ಟು ಅಂಕಗಳನ್ನು ಪಡೆದು ಎಲ್ಲರಿಗೂ ಸ್ಪೂರ್ತಿದಾಯಕವಾಗಿದ್ದಾಳೆ.

ಹೌದು, ಡೌನ್ ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣ ನಿವಾಸಿಯಾಗಿರುವ ಸುಶ್ರಾವ್ಯ ಎಂಬ ಬಾಲಕಿ SSLC ಪರೀಕ್ಷೆಯಲ್ಲಿ 80% ಅಂಕ ಪಡೆದು ಸಾಧನೆಗೆ ಯಾವುದೇ ರೀತಿಯ ತೊಂದರೆಯೂ ಅಡ್ಡಿಯಾಗುವುದಿಲ್ಲ ಎಂಬುದನ್ನ ತೋರಿಸಿದ್ದಾರೆ.

ಡೌನ್ ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿರುವ ಈಕೆಗೆ ಕಲಿಕಾ ದೌರ್ಬಲ್ಯದ ಜೊತೆಗೆ ಮರೆವು ಹಾಗೂ ಅಲ್ಪ ಬುದ್ದಿಮಾಂದ್ಯತೆ ಸಹ ಇದೆ. ಇದೆಲ್ಲದರ ನಡುವೆಯೂ ಸಹ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ನೀಡುವ ವಿನಾಯತಿಯ ಅಡಿಯಲ್ಲಿ ಪರೀಕ್ಷೆ ಬರೆದು 400 ಕ್ಕೆ 321 ಅಂಕ ಗಳಿಸಿ ಪಾಸಾಗಿದ್ದಾಳೆ. (ವಿನಾಯತಿ ಪರೀಕ್ಷೆಯಲ್ಲಿ 400 ಅಂಕಕ್ಕೆ ಮಾತ್ರ ಪರೀಕ್ಷೆ ಬರೆಯಲಾಗುತ್ತದೆ)

ತನ್ನ ಈ ಸಾಧನೆಗೆ ಎಸ್.ಡಿ.ಎ ಶಾಲೆಯ ಎಲ್ಲ ಶಿಕ್ಷಕರ ಸಂಪೂರ್ಣ ಸಹಕಾರ ಹಾಗೂ ನನ್ನ ತಾಯಿ ರೇಖಾರವರ ಪ್ರಾಮಾಣಿಕ ತರಬೇತಿ ಕಾರಣ ಎಂದು ಬಾಲಕಿ ಹೇಳಿದ್ದಾಳೆ. ತನಗಿದ್ದ ಕಾಯಿಲೆಯನ್ನು ಸಹ ದಿಕ್ಕರಿಸಿ ಸಾಧನೆ ಮಾಡಿ ತೋರಿಸಿದ ಈ ಬಾಲಕಿಗೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.