ಕೇವಲ 6 ದಿನಗಳಲ್ಲಿ ತನ್ನ ಹಳ್ಳಿಗೆ ಏಕಾಂಗಿಯಾಗಿ ರಸ್ತೆ ನಿರ್ಮಿಸಿದ ಮಾಂಜಿ.!

ಸರ್ಕಾರಗಳು ಮಾಡಿಕೊಡದ ಎಷ್ಟೋ ಕೆಲಸಗಳನ್ನು ಕೆಲವರು ತಮಗೋಸ್ಕರವೋ, ಇಲ್ಲವೇ ತಮ್ಮ ಹಳ್ಳಿಗೋಸ್ಕರವೋ ಮಾಡುವ ಎಷ್ಟೋ ಜನರ ಸ್ಫೂರ್ತಿದಾಯಕ ಸುದ್ದಿಗಳನ್ನು ನೋಡಿರುತ್ತೇವೆ, ಕೇಳಿರುತ್ತವೆ. ಇದಕ್ಕೆ ನಿದರ್ಶನವೆಂಬಂತೆ ತನ್ನ ಪತ್ನಿಗೋಸ್ಕರ ಗುಡ್ಡವನ್ನು ಕಡಿದು ರಸ್ತೆ ಮಾಡಿದ ಮಾಂಜಿಯ ಕತೆ ಎಲ್ಲರೂ ಕೇಳಿರುತ್ತವೆ.

ಈಗ ಅದೇ ರೀತಿ ಕೀನ್ಯಾದ ವ್ಯಕ್ತಿಯೊಬ್ಬ ರಸ್ತೆ ನಿರ್ಮಿಸಿ ಸರ್ಕಾರ ಮಾಡದ ಕೆಲಸವನ್ನ ತಾನೊಬ್ಬನೇ ಮಾಡಿದ್ದಾನೆ. ಆದರೆ ಈತ ತನ್ನ ಹೆಂಡತಿಗಾಗಿ ರಸ್ತೆ ನಿರ್ಮಾಣ ಮಾಡಲಿಲ್ಲ. ಬದಲಿಗೆ ತನ್ನ ಹಳ್ಳಿಯ ಜನರಿಗೋಸ್ಕರ ರಸ್ತೆ ನಿರ್ಮಾಣ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಲ್ಲದೇ, ಆತನ ಊರಿನ ಜನರ ದೃಷ್ಟಿಯಲ್ಲಿ ಹೀರೋ ಆಗಿಬಿಟ್ಟಿದ್ದಾನೆ.

ಈ ವ್ಯಕ್ತಿ ಕೀನ್ಯಾ ದೇಶದ ಕಂಗಂಡಾ ಎಂಬ ಹಳ್ಳಿಯವನಾಗಿದ್ದು, ಆ ಊರಿನ ಬಳಿ ದಟ್ಟವಾದ ಅರಣ್ಯ ಪ್ರದೇಶವಿದೆ. ಆ ಅರಣ್ಯದ ಬಳಿ ವಾಸಿಸುವ ಜನರಿಗೆ ಆ ಊರಿಗೆ ಹೋಗೋದಕ್ಕೆ ಸರಿಯಾದ ರಸ್ತೆಯೇ ಇರಲಿಲ್ಲ. ಹೀಗಾಗಿ ಅದೇ ಗ್ರಾಮದ ನಿಕೊಲಸ್ ಮಚಾಮಿ ಎಷ್ಟೋ ಬಾರಿ ಸ್ಥಳೀಯ ನಾಯಕರಿಗೆ ಹಾಗೂ ಸರ್ಕಾರಕ್ಕೆ ಎಷ್ಟೋ ಬಾರಿ ರಸ್ತೆಯ ಬಗ್ಗೆ ಮನವಿ ಮಾಡಿದ್ದರೂ ಯಾರೂ ಸರಿಯಾಗಿ ಸ್ಪಂದಿಸಿರಲಿಲ್ಲ.

ರಸ್ತೆಯ ಸಂಪರ್ಕವಿಲ್ಲದೇ ಚರ್ಚ್ ಗಾಗಲಿ, ಶಾಪಿಂಗ್ ಗಾಗಲಿ ಬೇರೆ ಯಾವುದೇ ಕೆಲಸಗಳಿಗಾಗಲಿ ಹೋಗುವುದಕ್ಕೆ ತುಂಬಾ ತೊಂದರೆ ಆಗುತಿತ್ತು. ತನ್ನ ಮನವಿಗೆ ಯಾರೂ ಸರಿಯಾಗಿ ಸ್ಪಂದಿಸದ ಕಾರಣ ನಿಕೊಲಸ್ ಮಚಾಮಿಯೇ ಒಂದು ನಿರ್ಧಾರ ತೆಗೆದುಕೊಂಡು ಒಬ್ಬಂಟಿಗರಾಗಿಯೇ ನಿಂತು ಸುಮಾರು ಒಂದು ಕಿಮೀ ರಸ್ತೆ ನಿರ್ಮಾಣ ಮಾಡಿದ್ದಾರೆ.

ನಿಕಲೋಸ್ ಮಚಾಮಿ ತನ್ನ ಬಳಿ ಇದ್ದ ಸಲಕರಣೆಗಳಿಂದಲೇ ಕಾಡು, ಕಡಿದಾದ ಗುಡ್ಡ ಇರುವ ಮಾರ್ಗದಲ್ಲಿ ಮರಗಳನ್ನು ಕಡಿದು ಒಂದು ಕಿಮೀ ರಸ್ತೆ ನಿರ್ಮಿಸಿ ಸೈ ಎನಿಸಿಕೊಂಡಿದ್ದಾನೆ. ಪ್ರತೀ ದಿವಸ ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರಿಗೆ ರಸ್ತೆಯ ಕೆಲಸ ಮಾಡುತ್ತಿದ್ದ ಈತ, ಕೇವಲ ಆರು ದಿನಗಳಲ್ಲಿ ಒಬ್ಬಂಟಿಗನಾಗಿಯೇ ರಸ್ತೆ ನಿರ್ಮಿಸಿ ಸರ್ಕಾರ ಮಾಡದ ಕೆಲಸವನ್ನು ತಾನು ಮಾಡಿದ್ದಾನೆ.

ಈಗ ಈ ರಸ್ತೆಯನ್ನೇ ಬಳಸಿಕೊಂಡು ಜನರು ಸುಲಭವಾಗಿಯೇ ಕಂಗಡಾಗೆ ಚರ್ಚ್ ಗೆ, ಶಾಪಿಂಗ್ ಗೆ ಹೋಗಬಹುದಾಗಿದ್ದು, ಮಹಿಳೆ ಹಾಗೂ ಮಕ್ಕಳಿಗೆ ನೆರವಾಗಲೆಂದು, ಸಮಯ ಉಳಿಸಲೆಂದು ಈ ಕೆಲಸ ಮಾಡಿದ್ದೇನೆ ಎಂದು ನಿಕೊಲಸ್ ಮಚಾಮಿ ಹೇಳಿದ್ದಾನೆ. ಈತನ ಈ ಕೆಲಸದಿಂದ ಊರಿನ ಜನರ ದೃಷ್ಟಿಯಲ್ಲಿ ಹೀರೊ ಆಗಿಬಿಟ್ಟಿದ್ದಾನೆ.