ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವುದು ಏಕೆ ಗೊತ್ತೆ? ಇಲ್ಲಿವೆ ತಿರುಪತಿ ದೇವಸ್ಥಾನದ ಅಚ್ಚರಿ ವಿಸ್ಮಯಗಳು…

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಸಪ್ತಗಿರಿ ವಾಸ ಶ್ರೀ ಶ್ರೀನಿವಾಸ ಕಲಿಯುಗದ ಪ್ರತ್ಯಕ್ಷ ದೈವ. ತಿರುಮಲೆಯಲ್ಲಿ ನೆಲೆಸಿ ಭಕ್ತರ ಉದ್ಧಾರ ಮಾಡುತ್ತಿರುವ ದಯಾಮಯಿ.ತಿರುಪತಿ ವೆಂಕಟೇಶ್ವರ ಸನ್ನಿಧಾನ ಭಾರತದಲ್ಲೇ ಒಂದು ಅತೀ ಪ್ರಾಚೀನವಾದ ದೇವಾಲಯ.ಇಲ್ಲಿ ದೇವಾಲಯದ ಬಾಗಿಲನ್ನು ತೆಗೆಯುವುದರಿಂದ ಹಿಡಿದು ಪೂಜೆ ಅಭಿಷೇಕ ಮುಗಿಸಿ ಬಾಗಿಲನ್ನು ಮುಚ್ಚುವವರೆಗೂ ಪಾರಪಂಪರಿಕ ವಿಧಿವಿಧಾನಗಳು ಆಗಮ ಶಾಸ್ತ್ರದ ಪ್ರಕಾರವೇ ನಡೆಯತ್ತವೆ.

ಇಲ್ಲಿಯ ವಿಸ್ಮಯಗಳು ಒಂದೆರಡಲ್ಲ.. ಪವಾಡ ಇತಿಹಾಸಗಳು ರೋಮಾಂಚನ. ಹೇಳುತ್ತಾ ಹೋದರೆ ದಿನಗಳು ಸಾಗುವುದಿಲ್ಲ. ಇಂತಹದ್ದೇ ಒಂದು ಕಥೆ ಅಥವಾ ಒಂದು ಸಂಗತಿಯನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ..

ಶ್ರೀನಿವಾಸನ ಪೂರ್ತಿ ವಿಗ್ರಹ ಸಂಪೂರ್ಣವಾಗಿ ಸ್ವಯಂ ಉದ್ಭವಮೂರ್ತಿ. ಇದನ್ನು ಯಾರೂ ಸ್ಥಾಪನೆಮಾಡಿಲ್ಲ. ಹಿಂದೆ ಶ್ರೀನಿವಾಸ ಹುತ್ತದಲ್ಲಿರುವಾಗ, ಸಾಕ್ಷಾತ್ ಶಿವ, ಹಸುವಿನ ರೂಪದಲ್ಲಿ ಬಂದು ಹಾಲುಣಿಸುತ್ತಿರುತ್ತಾನೆ. ರಾಜಾ ಚೋಳನ ಅರಮನೆ ಹಸುಗಳನ್ನ ನೋಡಿಕೊಳ್ಳುತ್ತಿದ್ದ ದನಗಾಹಿಗೆ ಈ ಕಾಮಧೇನು ಹೆಸರಿನ ಹಸು ಹಾಲು ಕೊಡದೇ ಇದ್ದುದೂ ಅನುಮಾನಕ್ಕೆ ಕಾರಣವಾಗಿರುತ್ತದೆ.

ಒಂದು ದಿನ, ಹಸುವನ್ನೇ ಮರೆಯಿಂದ ಹಿಂಬಾಲಿಸಿಕೊಂಡು ಹೋಗುತ್ತಾನೆ. ಆಗ ಕಾಮಧೇನು, ಹುತ್ತದಲ್ಲಿದ್ದ ಶ್ರೀನಿವಾಸನಿಗೆ ಹಾಲು ಎರೆಯುತ್ತಿರುತ್ತಾಳೆ. ಕೋಪಗೊಂಡ ದನಗಾಹಿ, ತನ್ನ ಕೊಡಲಿಯಿಂದ ಹಸುವನ್ನ ಹೊಡೆಯೋಕೆ ಮುಂದಾಗ್ತಾನೆ. ಆಗ ಆ ಏಟು ಶ್ರೀನಿವಾಸನ ತಲೆಗೆ ಬೀಳುತ್ತದೆ.

ಆನಂತರ, ಶ್ರೀನಿವಾಸನ ಪರಮ ಭಕ್ತೆ ನೀಲಾದೇವಿ, ತನ್ನ ಕೂದಲನ್ನೇ ಕತ್ತರಿಸಿ, ಶ್ರೀನಿವಾಸನಿಗೆ ಜೋಡಿಸುತ್ತಾಳೆ. ಆಗ ಶ್ರೀನಿವಾಸ, ನೀಲಾದೇವಿಗೆ ಒಂದು ವರ ನೀಡುತ್ತಾನೆ. ಕಲಿಯುಗದಲ್ಲಿ, ಭಕ್ತರು, ನನ್ನ ಕ್ಷೇತ್ರಕ್ಕೆ ಬಂದು ಕೊಡುವ ತಲೆ ಕೂದಲ ಮುಡಿ, ನಿನ್ನ ಮೂಲಕವೇ ನನಗೆ ಅರ್ಪಣೆಯಾಗಲಿ ಎಂದು.

ಈಗಲೂ, ಭಕ್ತರು ಕೊಡುವ ತಲೆಮುಡಿ, ನೀಲಾದೇವಿಯ ಮೂಲಕವೇ ಪರಮಾತ್ಮನಿಗೆ ಸಮರ್ಪಣೆ ಆಗುತ್ತದೆ ಎಂಬುದು ಪುರಾಣ ನಂಬಿಕೆ. ಹೀಗೆ ನೀಲಾದೇವಿ, ಜೋಡಿಸಿದ ತಲೆಕೂದಲೇ, ಈಗಲೂ, ಪರಮಾತ್ಮನ ಹಿಂಭಾಗದ ತಲೆಯಲ್ಲಿದೆ. ದೇವಸ್ಥಾನದ ಪ್ರಾರಂಭ ಮಹಾದ್ವಾರದ ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯ ತಲೆಯ ಮೇಲೆ ಹೊಡೆದ ಗಾಯ ಈಗಲೂ ಇದೆ!! ಆ ಕಾರಣದಿಂದನೇ ಸ್ವಾಮಿ ತಲೆಗೆ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡಾ ನಡೆದುಕೊಂಡು ಬಂದಿದೆ!! ಇಂತಹ ಅನೇಕ ಅಚ್ಚರಿ ಸಂಗತಿಗಳು ಈ ದೇವಾಲಯದಲ್ಲಿ ಅಡಗಿದೆ!

ಹೀಗಾಗಿ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಳಿಗಾಗಿ, ಹರಕೆಗಳಿಗಾಗಿ ತಮ್ಮ ಪುರುಷರು, ಮಹಿಳೆಯರು ಎನ್ನದೇ ತಮ್ಮ ಕೂದಲನ್ನು ಬಾಲಾಜಿಗೆ ಸಮರ್ಪಿಸುತ್ತಾರೆ.