ಕಂಪೆನಿಯಲ್ಲಿದ್ದ ಒಳ್ಳೆ ಕೆಲಸ ಬಿಟ್ಟು ಸಗಣಿಯಿಂದ ಮಾಡಿದ ವಸ್ತುಗಳ ಮಾರಾಟ ಶುರು ಮಾಡಿ ಯಶಸ್ವಿಯಾದವರ ಸ್ಫೂರ್ತಿ ಕತೆ.!

ನಿರುದ್ಯೋಗ ಹೆಚ್ಚಾಗಿರುವ ಈ ಸಮಯದಲ್ಲಿ, ಕೆಲವರು ಇರುವ ತಮ್ಮ ಕೆಲಸಗಳನ್ನು ಬಿಟ್ಟು ಸ್ವಂತ ವ್ಯಾಪಾರ ಮಾಡಿ ಯಶಸ್ಸು ಕಾಣುತ್ತಿದ್ದಾರೆ. ಇದರೊಂದಿಗೆ ಹೊಸ ಆವಿಷ್ಕಾರಗಳು ಕೂಡ ನಡೆಯುತ್ತಿವೆ.

ಹೌದು, ಡಿಗ್ರಿ ಓದಿದ್ದರೂ ತಮಗಿದ್ದ ಒಳ್ಳೆ ಕೆಲಸವನ್ನು ಬಿಟ್ಟು ಪ್ರಭಾತಮಣಿ ತ್ರಿಪಾಠಿ ಮತ್ತು ಅನುಜ್ ರಾಠೆ ಎನ್ನುವವರು ತಮ್ಮ ವಿನೂತನ ಕೆಲಸಕ್ಕೆ ಮುಂದಾಗಿದ್ದಾರೆ. ಇವರು ತಿಪ್ಪೆಗೆ ಬಿದ್ದು ಗೊಬ್ಬರವಾಗುವ ಸಗಣಿಯಿಂದ ವಸ್ತುಗಳನ್ನು ತಯಾರಿಸಿ ಮಾರಾಟ ಶುರು ಮಾಡಿದ್ದಾರೆ.

ಕಂಪ್ಯೂಟರ್ ಸೈನ್ಸ್ ಡಿಗ್ರಿ ಮುಗಿಸಿರುವ ಪ್ರಭಾತಮಣಿ ತ್ರಿಪಾಠಿ ಹಾಗೂ MBA ಮುಗಿಸಿರುವ ಅನುಜ್ ರಾಠೆ ಇವರಿಬ್ಬರು ಕಂಪೆನಿಯಲ್ಲಿದ್ದ ಒಳ್ಳೆ ಕೆಲಸವನ್ನು ಬಿಟ್ಟು ಸಗಣಿ ಮೇಲೆ ಪ್ರಯೋಗ ನಡೆಸಿ, ಅದರಿಂದ ಯಶಸ್ವಿಯಾಗಿ ವಿನೂತನ ಬ್ಯುಸಿನೆಸ್ ಶುರು ಮಾಡಿದ್ದಾರೆ.

65 ಕ್ಕೂ ಹೆಚ್ಚು ರೈತರಿಂದ, ಹಾಲು ನೀಡದ ಹಸುವಿನಿಂದ ಸಗಣಿ ಸಂಗ್ರಹಿಸುವ ಇವರು, ದಿನಕ್ಕೆ 30ಕ್ಕೂ ಹೆಚ್ಚು ಹಸುಗಳಿಂದ ಸಗಣಿ ಸಂಗ್ರಹ ಮಾಡುತ್ತಾರೆ.ಸಗಣಿ ಹಾಕಿದ ಎರಡು ಗಂಟೆ ಒಳಗೆ ಸಗಣಿ ಸಂಗ್ರಹಿಸುವ ಇವರು,
ನೀರು ಹಾಗೂ ಬಟ್ಟೆಯಿಂದ ಸ್ವಚ್ಛಗೊಳಿಸುತ್ತಾರೆ. ನಂತ್ರ ಸಗಣಿಯನ್ನು ಒಣಗಿಸಿ, ಮಶಿನ್ ಸಹಾಯದಿಂದ ಶೀಟ್ ತಯಾರಿಸಿ ಅದಕ್ಕೆ ಸುಂದರ ರೂಪ ನೀಡುತ್ತಾರೆ.

ಪ್ರಭಾತಮಣಿ ತ್ರಿಪಾಠಿ ಮತ್ತು ಅನುಜ್ ರಾಠೆ ತಮ್ಮ ಈ ಹೊಸ ವ್ಯವಹಾರದಿಂದ ಗ್ರಾಮೀಣ ಮಹಿಳೆಯರು ಸೇರಿದಂತೆ 7 ಮಂದಿಗೆ ಕೆಲಸ ನೀಡಿದ್ದಾರೆ.