ಅನ್ನ ನೀರಿಲ್ಲದೆ ಹಸಿವಿನಿಂದ ಬಳಲುತ್ತಿದ್ದ ಮಂಗಗಳಿಗೆ ತಾಯಿಯಂತೆ ಹಾಲುಣಿಸಿದ ಗೋಮಾತೆ..!

ಬೇಸಿಗೆ ಕಾಲ ಬಂತೆಂದರೆ ಬಿರು ಬೇಸಿಗೆಗೆ ಮನುಷ್ಯರೇ ತಡೆದುಕೊಳ್ಳುವುದು ಕಷ್ಟ. ಇನ್ನು ಪ್ರಾಣಿ-ಪಕ್ಷಿಗಳ ಕತೆ ಕೇಳಬೇಕೆ. ಅದರಲ್ಲೂ ಮರಳುಗಾಡಿನನಿಂದಲೇ ಸುತ್ತುವರಿದಿರುವ ರಾಜಸ್ಥಾನದಲ್ಲಿನ ಬಿಸಿಲಿನ ತಾಪದ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತದೆ. ಇಲ್ಲಿ ಅಂತೂ ಬಿಸಿಲಿನ ತಾಪಕ್ಕೆ ಜನರು ಸೇರಿದಂತೆ ಪ್ರಾಣಿ ಪಕ್ಷಿಗಳು ಬಸವಳಿದು ಹೋಗುತ್ತವೆ.

ರಾಜಸ್ಥಾನದ ಸಿರೊಹಿಯಲ್ಲಿ ಭಾರಿ ಬಿಸಿಲಿನಿಂದ ಜನಸಾಮಾನ್ಯರು ಸೇರಿದಂತೆ ಪ್ರಾಣಿಗಳು ಕೂಡ ತತ್ತರಿಸಿ ಹೋಗಿವೆ. ಪ್ರಾಣಿಗಳಿಗಂತೂ ಈ ಬಿರು ಬಿಸಿಲಿನಿಂದ ತಡೆದುಕೊಳ್ಳುವುದು ಒಂದೆಡೆಯಾದರೆ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿವೆ.

ಹೀಗೆ ಹಸಿವಿನಿಂದ ಬಳಲುತ್ತಿದ್ದ ಮಂಗಗಳಿಗೆ ಹಾಲುಣಿಸಿ ತಾಯಿಯಾಗಿರುವ ಹಸುವೊಂದು ಸಖತ್ ಸುದ್ದಿಯಾಗಿದೆ. ಹೌದು ರಾಜಸ್ಥಾನದ ಸಿರೋಹಿ ಜಿಲ್ಲೆಯ ಪಿಂಡ್ವಾಲಾ ಎಂಬ ಪ್ರದೇಶದಲ್ಲಿ ಜಬೇಶ್ವರ ಮಹಾದೇವ್ ದೇವಾಲಯದಲ್ಲಿ ಹಸುವೊಂದು ಮಂಗಗಳಿಗೆ ಹಾಲುಣಿಸಿ ಈಗ ಭಾರಿ ಸುದ್ದಿಯಾಗಿದೆ.

ಮಂಗಗಳಿಗೆ ಹಾಲುಣಿಸಿ ತಾಯಿಯಂತೆ ಪೋಷಿಸುತ್ತಿರುವ ಈ ಹಸು ಹಲವಾರು ವರ್ಷಗಳಿಂದ
ಜಬೇಶ್ವರ ಮಹಾದೇವ್ ದೇವಾಲಯದಲ್ಲಿ ವಾಸಮಾಡುತ್ತಿದ್ದು, ಪ್ರತೀ ದಿವಸ ಮಂಗಗಳಿಗೆ ಹಾಲುಣಿಸಿ ಅವುಗಳ ತಾಯಿಯ ಸ್ಥಾನದಲ್ಲಿ ನಿಂತು ಮಂಗಗಳ ಜೀವ ಕಾಪಾಡುತ್ತಿದೆ.

ಈ ಬಿರು ಬೇಸಿಗೆಯಲ್ಲಿ ಮನುಷ್ಯರೇ ಪರದಾಡುವ ಸಮಯದಲ್ಲಿ, ಆಹಾರ, ನೀರಿಲ್ಲದೆ ಪ್ರಾಣಿಗಳು ಪರದಾಡುತ್ತಿದ್ದು ದೇವಸ್ಥಾನ ಸಮೀಪದಲ್ಲೇ ಇದ್ದ ಮಂಗಗಳಿಗೆ ಈ ಹಸು ಒಂದು ಬಾರಿ ಹಾಲು ನೀಡಿತ್ತು. ಆನಂತರ ಈ ಕಾಮಧೇನು ಹಸು ದಿನಾಲೂ ಮಂಗಗಳಿಗೆ ಹಾಲು ನೀಡಿ ತಾಯಿಯಂತೆ ಪೋಷಣೆ ಮಾಡುತ್ತಿದೆ ಎಂದು ಸ್ಥಳೀಯರು ಹೇಳಿತ್ತಾರೆ.

ಈ ಹಸು ಪ್ರತೀ ದಿವಸ ಮಂಗಗಳಿಗೆ ತಾಯಿಯಂತೆ ಹಾಲುಣಿಸುತ್ತಿದ್ದು, ಈ ಮನೋಹರ ದೃಶ್ಯವನ್ನು ನೋಡಲು ಅಕ್ಕಪಕ್ಕದ ಗ್ರಾಮದ ಜನರು ಬರುತ್ತಿದ್ದಾರೆ. ಇದೇ ಕಾರಣಕ್ಕೆ ಹಸುವಿಗೆ ಗೋಮಾತೆ, ಕಾಮಧೇನು ಎಂದೆಲ್ಲಾ ಕರೆಯಲಾಗುತ್ತೆ. ಪ್ರತೀ ದಿವಸ ಮಂಗಗಳಿಗೆ ಹಾಲುಣಿಸುವ ಈ ಹಸು ಸಾಕ್ಷಾತ್ ಕಾಮಧೇನುವೇ ಸರಿ…