13ನೇ ವಯಸ್ಸಿಗೆ ಬರೋಬ್ಬರಿ 135 ಪುಸ್ತಕಗಳನ್ನು ಬರೆದು ವಿಶ್ವದಾಖಲೆ ನಿರ್ಮಿಸಿದ ಪುಟ್ಟ ಬಾಲಕ.!

ಕಂಪ್ಯೂಟರ್ ಹಾಗೂ ಸ್ಮಾರ್ಟ್ ಫೋನ್ ಕಾಲದ ಈ ಯುಗದಲ್ಲಿ ಪ್ರತಿಯೊಂದಕ್ಕೂ ಮೊಬೈಲ್ ಸೇರಿದಂತೆ ಕಂಪ್ಯೂಟರ್ ಮೇಲೆ ಅವಲಂಬಿತರಾಗಿದ್ದಾರೆ. ಇನ್ನೂ ಪುಸ್ತಕಗಳನ್ನು ಓಡುವುದೆಂತು. ಪುಸ್ತಕಗಳನ್ನು ಬರೆಯುವವರು ಸಿಗುವುದು ತೀರಾ ಕಡಿಮೆ. ಇನ್ನೂ ಅದರಲ್ಲೂ ಹೀಗಿನ ಕಾಲದ ಮಕ್ಕಳಿಗೆ ಸ್ಮಾರ್ಟ್ ಮೊಬೈಲ್ ಒಂದಿದ್ದರೆ ಸಾಕು..ಜಗತ್ತನ್ನೇ ಮರೆತುಬಿಡುತ್ತಾರೆ.

ಆದರೆ ತಾನು ಆಟ ಆಡಿಕೊಂಡು ಬೆಳೆಯಬೇಕಾದ ವಯಸ್ಸಿನಲ್ಲಿ ಬಾಲಕನೊಬ್ಬ 135 ಪುಸ್ತಕಗಳನ್ನು ಬರೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾನೆ. ಹೌದು, ಉತ್ತರ ಪ್ರದೇಶದ 13 ವರ್ಷದ ಮೃಗೇಂದ್ರ ರಾಜ್ ಎಂಬ ಬಾಲಕ ಗಣ್ಯರ ಜೀವನಚರಿತ್ರೆ ಹಾಗೂ ಧರ್ಮಗಳ ಬಗ್ಗೆ 135 ಪುಸ್ತಕಗಳನ್ನು ಬರೆದಿದ್ದು, ನಾಲ್ಕು ವಿಶ್ವದಾಖಲೆಯೊಂದಿಗೆ ತನ್ನ ಚಿಕ್ಕ ವಯಸ್ಸಿನಲ್ಲೇ ಅಪರೂಪದ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಆಜ್ ಕಾ ಅಭಿಮನ್ಯು ಎಂಬ ಕಾವ್ಯನಾಮದಲ್ಲಿ ಪುಸ್ತಕಗಳನ್ನು ಬರೆಯುತ್ತಿರುವ ಈ ಬಾಲಕ ತನ್ನ ಆರನೇ ವಯಸ್ಸಿನಲ್ಲೇ ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದ್ದ ಎಂದು ಪೋಷಕರು ಹೇಳುತ್ತಾರೆ. ನಂತರ ಪುಸ್ತಕಗಳನ್ನು ಬರೆಯುವುದೇ ತನ್ನ ಹವ್ಯಾಸ ಮಾಡಿಕೊಂಡು ಎಂದು ಮೃಗೇಂದ್ರ ರಾಜ್ ಅವರ ತಂದೆ ತಾಯಿಗಳು ಹೇಳುತ್ತಾರೆ.

ಈ ಬಾಲಕನ ತಂದೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಪುಸ್ತಕಗಳನ್ನು ಬರೆಯುವುದರ ಬಗ್ಗೆ ತನ್ನ ಮಗ ತೋರುತ್ತಿದ್ದ ಆಸಕ್ತಿಯನ್ನು ಗಮನಿಸಿದ ಆತನ ತಾಯಿ ಇದಕ್ಕೆ ಬೆಂಬಲಿಸಿ ಪ್ರೋತ್ಸಾಹ ನೀಡಿದ್ದಾರೆ.

ತಾನು ಬರೆದ ಪುಸ್ತಕಗಳ ಬಗ್ಗೆ ಮಾತನಾಡಿದ ಬಾಲಕ ಹಿಂದೂಗಳ ಮಹಾಕಾವ್ಯ ರಾಮಾಯಣದಲ್ಲಿ ಬರುವ 51 ಪಾತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿ ಬರೆದಿದ್ದು ಬರೆದ ಎಲ್ಲಾ ಪುಸ್ತಕಗಳು 25 ರಿಂದ 100 ಪುಟಗಳನ್ನು ಹೊಂದಿವೆ ಎಂದು ಹೇಳಿದ್ದಾನೆ. ನನ್ನ ಪ್ರತಿಭೆಯನ್ನು ಮೆಚ್ಚಿ ಲಂಡನ್ ವರ್ಲ್ಡ್ ಯೂನಿವರ್ಸಿಟಿ ಆಫ್ ರೆಕಾರ್ಡ್ಸ್ ಡಾಕ್ಟರೇಟ್ ಪದವಿ ನೀಡುವುದಾಗಿ ಆಫರ್ ನೀಡಿತ್ತು ಎಂದು ಹೇಳಿದ್ದಾನೆ.