ಅರಳಿಮರವೇಕೆ ಬಾಡುವುದಿಲ್ಲ ಗೊತ್ತಾ..?ಇದರ ಹಿಂದೆ ಇದೆ ರೋಚಕ ಪುರಾಣ ಕತೆ.!

ರಾಮಲಕ್ಷ್ಮಣರು ವನವಾಸದಲ್ಲಿದ್ದಾಗ ಗಯಾ ಕ್ಷೇತ್ರಕ್ಕೆ ಬರುತ್ತಾರೆ. ಸೀತಾದೇವಿಯನ್ನು ಫಲ್ಗುಣಿ ನದಿಯ ದಂಡೆಯಲ್ಲಿ ಕೂಡಿಸಿ ಅವರಿಬ್ಬರೂ ಕಾಡಿಗೆ ಹೋಗುತ್ತಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ನದಿಯ ಒಳಗಿನಿಂದ ಕೈಯೊಂದು ಹೊರಗೆ ಬರುತ್ತದೆ.

ಸೀತಾದೇವಿ ನನಗೆ ಹಸಿವೆಯಾಗುತ್ತಿದೆ ಎಂದಂತಾಗುತ್ತದೆ. ಪದೇ ಪದೇ ಆ ಧ್ವನಿ ಮರುಕಳಿಸುತ್ತದೆ. ಆ ಧ್ವನಿ ಮಹಾರಾಜರಂತೆ ಇರುತ್ತದೆ. ಸೀತೆಗೆ ಏನು ಮಾಡುವುದೆಂದೇ ತೋಚುವುದಿಲ್ಲ. ಬೇರೆ ದಾರಿ ಇಲ್ಲದೆ ಮರಳಿನ ಉಂಡೆಯನ್ನು ಮಾಡಿ ಅದರಲ್ಲಿ ಅನ್ನವನ್ನು ಆವಾಹನೆ ಮಾಡಿ ನದಿಯಿಂದ ಮೇಲೆ ಬಂದ ಕೈಯೊಳಗೆ ಇಡುತ್ತಾಳೆ. ನಂತರ ತನ್ನ ಕರ್ತವ್ಯಕ್ಕೆ ಐದು ಸಾಕ್ಷಿಗಳನ್ನು ಆಧಾರವಾಗಿ ಇಟ್ಟುಕೊಳ್ಳುತ್ತಾಳೆ.

ಸೀತೆ ನೀಡಿದ ಆಹಾರದಿಂದ ದಶರಥ ಸಂತುಷ್ಟನಾಗುತ್ತಾನೆ. ಹರಸಿ ಮರೆಯಾಗುತ್ತಾನೆ. ಇತ್ತ ರಾಮ ಲಕ್ಷ್ಮಣರು ಮರಳಿದಾಗ ಸೀತೆ ಅವರಿಗೆ ನಡೆದ ಸಂಗತಿಯೆಲ್ಲವನ್ನೂ ವಿವರಿಸುತ್ತಾಳೆ. ರಾಮ ಲಕ್ಷ್ಮಣರಿಗೆ ಮೊದಲಿಗೆ ಸೀತೆಯ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ. ಆಗ ಸೀತೆ ತನ್ನ ಕೃತ್ಯಕ್ಕೆ ಫಲ್ಗುಣಿ ನದಿ, ತುಳಸಿ ಗಿಡ, ಹಸು ಬ್ರಾಹ್ಮಣ ಮತ್ತು ಅರಳಿಮರವೇ ಸಾಕ್ಷಿ ಎನ್ನುತ್ತಾಳೆ. ಆದರೆ, ಸೀತೆಯ ಸಹಾಯಕ್ಕೆ ಅರಳಿ ಮರದ ಹೊರತಾಗಿ ಮತ್ಯಾರು ಬರುವುದಿಲ್ಲ. ಅರಳಿ ಮರ ಸಾಕ್ಷ್ಯ ನುಡಿಯುತ್ತದೆ. ರಾಮ, ಲಕ್ಷ್ಮಣರು ಸೀತೆಯ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸುತ್ತಾರೆ.

ಆದರೆ, ಸೀತೆ ತನ್ನ ಮಾತಿಗೆ ವಿರುದ್ಧವಾಗಿ ನಡೆದುಕೊಂಡ ಫಾಲುಣಿ ನದಿ, ಹಸು, ಬ್ರಾಹ್ಮಣ ಮತ್ತು ತುಳಸಿ ಗಿಡಕ್ಕೆ ಶಾಪ ಕೊಡುತ್ತಾಳೆ. ಫಾಲುಣಿ ನದಿಗೆ ಮಳೆಗಾಲದಲ್ಲೂ ಸಹ ನಿನ್ನ ಪಾತ್ರಕ್ಕೆ ಎಷ್ಟೇ ನೀರು ಬಂದರೂ ಬರಿದಾಗಲಿ. ನೀರು ನೆಲದ ಒಳಗೇ ಉಳಿದುಕೊಳ್ಳಲಿ.

ಹೇ ವಿಪ್ರೋತ್ತಮ ನೀನು ಸತ್ಯ ಹೇಳದೇ ನನಗೆ ಮೋಸ ಮಾಡಿದೆ. ಹೀಗಾಗಿ ನೀನು ಈ ಕ್ಷೇತ್ರದಲ್ಲೇ ಇದ್ದು ಕ್ಷೇತ್ರಕ್ಕೆ ಬರುವ ಯಾತ್ರಿಕರನ್ನು ಪೀಡಿಸಿ ಅದರಿಂದ ಬಂದ ಲಾಭದಿಂದ ಜೀವನ ನಡೆಸು.

ಗೋಮಾತೆ ನೀನು ಜಗವ ಬೆಳಗಬೇಕಾದವಳು. ಆದರೆ, ನೀನು ನನ್ನ ಮಾತು ಮೀರಿ ಲೊಭತನ ಮೆರೆದೆ. ಹಾಗಾಗಿ ಗಯಾ ಕ್ಷೇತ್ರದಲ್ಲೇ ಇದ್ದುಕೊಂಡು ಅವರಿವರು ಪಿಂಡವನ್ನು ತಿನ್ನುತ್ತಾ ಜೀವನ ಸಾಗಿಸು. ಎಷ್ಟು ತಿಂದರೂ ನಿನ್ನ ಹೊಟ್ಟೆ ತುಂಬದಿರಲಿ.

ತುಳಸಿ ಮಾತೆ ನೀನು ಪವಿತ್ರಳಾದವಳು. ನೀನು ಸಹ ನನ್ನ ಮಾತು ಮೀರುವಿ ಎಂದುಕೊಂಡಿರಲಿಲ್ಲ. ಹಾಗಾಗಿ ನೀನು ಎಲ್ಲೆಂದರಲ್ಲಿ ಬೆಳೆಯುವಂತಾಗಲಿ.
ಸೀತೆಯ ಶಾಪದಂತೆ ಫಲ್ಗುಣಿ ನದಿ ಬತ್ತಿಹೋಗಿದೆ.

ನದಿಯೊಳಗಿನ ಮರಳನ್ನು ಅಗೆದಾಗಳಷ್ಟೆ ಇಂದಿಗೂ ನೀರು ಬರುತ್ತದೆ. ಫಾಲುಣಿ ನದಿ ತೀರದಲ್ಲಿರುವ ಹಸುಗಳಿಗೆ ಪಿಂಡಗಳೇ ಆಹಾರ. ಅವು ಎಷ್ಟು ಹಸಿದಿರುತ್ತವೆ ಎಂದರೆ ಕೆಲವೊಮ್ಮೆ ಪಿಂಡ ವಿಸರ್ಜನೆಗೂ ಅವಕಾಶ ಕೊಡದೆ ಬಾಯಿ ಹಾಕುತ್ತದೆ. ನಂತರ ಸೀತೆಯ ದೃಷ್ಟಿ ಅರಳೀ ಮರದತ್ತ ಬೀಳುತ್ತದೆ. ಆಕೆ ಪರಮ ಸಂತೋಷದಿಂದ ಆಶೀರ್ವಾರ್ದಿಸುತ್ತಾಳೆ. ಅಂದಿನಿಂದ ಅರಳಿಮರ ಬಾಡದೆ ಕಂಗೊಳಿಸುತ್ತದೆ.

ಮೂಲ : ಬೋಧಿವೃಕ್ಷ